Friday, August 20, 2010

*....ಅಂದು ನಾನು ಮಗುವಾಗಿದ್ದೆ..ಈಗ ಮಗುವಿನ ತಂದೆ ...*


ಅಂದು ನಾನು ಮಗುವಾಗಿದ್ದೆ. ಜ್ವರ ಮೈ ಯನ್ನು ಬಿಸಿಯೇರಿಸಿತ್ತು. ಅಪ್ಪ ಶಾಲೆಗೇ ರಜೆ ಹಾಕಿ 3 ಕಿಲೋ ಮೀಟರ್ ದೂರದಲ್ಲಿರೋ ಹೋಬಳಿ ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಸೈಕಲ್ ನಲ್ಲಿ ನನ್ನನ್ನು ಹಿಂಬದಿಯಲ್ಲಿ ಕೂರಿಸಿಕೊಂಡು , ಮಗ ಹುಷಾರಾದರೆ ಎಂಬ ಗುರಿಯನ್ನು ಮುಂದಿಟ್ಟುಕೊಂಡು ಸೈಕಲ್ ಪೆಟಲ್ ನ್ನು ತುಳಿಯುತ್ತಿದ್ದರು. ಅಪ್ಪನ ಶಾಲೆ ಕಾವೇರಿ ನದಿಯ ಆಚೆಗಿನ ಊರಿನಲ್ಲಿತ್ತು. ನಮ್ಮ ಹಳ್ಳಿ ಯಿಂದ 1 ಕಿ. ಮೀ .  ದೂರದಲ್ಲಿರುವ ನದಿಯನ್ನು  ತಲುಪಲು ಸೈಕಲ್ಲು,  ನಂತರ ಹರಗಲ (ಹಾಯಿ ದೋಣಿ ಅಥವಾ ತೆಪ್ಪ ಅಂತಲೂ ಕರೆಯುತ್ತಾರೆ ) ದ ಮೇಲೆ ಬೈಸಿಕಲ್ ನ್ನು ಇಟ್ಟು ನದಿಯನ್ನು ಹಾದು ನಂತರ ಅಲ್ಲಿಂದ 2 ಕಿ  .ಮೀ. ದೂರದ ಶಾಲೆಗೇ ಬೈಸಿಕಲ್ ತುಳಿಯುತ್ತ  ತೆರಳುತ್ತಿದ್ದರು. ಬರುವಾಗಲೂ ಹಾಗೆಯೇ. ಈ ಮಧ್ಯೆ ನಮಗೇನಾದರೂ ಹುಷಾರು ಇಲ್ಲದಿದ್ದರೆ ಮತ್ತೆ ನಮ್ಮೂರಿನಿಂದ ೩ ಕಿ ಲೋ ಮೀಟರ್ ದೂರದ ಪ್ರಯಾಣ. ಹೀಗಿತ್ತು ನನ್ನ ಬದುಕಿನ ಆಗಿನ ಕಾಲ . ಆ ದಿನ ಆಸ್ಪತ್ರೆಗೆ ತೋರಿಸಲು ಅಪ್ಪನ ಬಳಿ ಕೈ ಯಲ್ಲಿ ಕಾಸಿರಲಿಲ್ಲ. ತಿಂಗಳ ಕೊನೆ ದಿನ ಆಗಿನ ಕಾಲದ ಪ್ರೈಮರಿ ಮಾಸ್ತರರ ಸಂಬಳ ಎಷ್ಟು ದಿನ ಜೆಬಿನಲ್ಲಿರುತ್ತಿತ್ತು ?!. ನನ್ನ ತಂದೆಯ ತಂದೆ ,ಅರ್ಥಾತ್ ತಾತ ಜಿಪುಣ ಶಿಕಾಮಣಿ, ನನ್ನ ಮೈಯ ಬಿಸಿ ಜ್ವರ ಆತನಿಗೆ ಅರ್ಥವಾಗಲಿಲ್ಲ. ನಮ್ಮ ತಂದೆ ಮತ್ತು  ತಾಯಿ ಒಂದೇ ಊರಿಗೆ ಸೇರಿದವರು. ಜಮೀನು ಮತ್ತು ಮನೆ ಅಕ್ಕ ಪಕ್ಕದಲ್ಲಿಯೇ. ನಮ್ಮ ತಾಯಿಯ ತಂದೆ, ಅಸ್ಟೊ   ಇಷ್ಟು ಹೊಂದಿಸಿ ನಮ್ಮ ತಂದೆಗೆ ಕೊಟ್ಟರು.ಅಂತೂ ಅಪ್ಪ ನನ್ನನ್ನು ತಮ್ಮ ಐರಾವತದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಹಿಂಬದಿಯಲ್ಲಿ  ಚಕ್ಲು ಬಕ್ಲು (ಎರಡು ಕಾಲನ್ನು ಮಡಚಿ, ಸೈಕಲ್ ಕ್ಯಾರಿಯರ್ ಮೇಲೆ ಟವಲ್ ಇಟ್ಟು ಅದರ  ಮೇಲೆ  ಕೂತಿದ್ದೆ) ಹಾಕಿ ಕೂತಿದ್ದ  ನಾನು , ಬಲಗಾಲನ್ನು ಹೇಗೋ ಕೆಳಗೆ ಬಿಟ್ಟು ಬಿಟ್ಟಿದ್ದೆ . ಬಲಗಾಲ ಹಿಮ್ಮಡಿ ಬೈಸಿಕಲ್ ನ ಚಕ್ರಕ್ಕೆ ಸಿಲುಕಿ ಎರಡು ಭಾಗವಾಗಿಬಿಟ್ಟಿತ್ತು. ಸ್ವಲ್ಪ ದೂರ ಹೋದ ಮೇಲೆ ಸೋರುತ್ತಿದ್ದ ರಕ್ತ ವನ್ನು ಯಾರೋ ನೋಡಿ ಹೇಳಿದ ಮೇಲೆ , ಅಪ್ಪನಿಗೆ ಗೊತ್ತಾಗಿದ್ದು. ಅಲ್ಲೇ ಮಾರ್ಗ ಮಧ್ಯದ ಹಳ್ಳಿಯ ಯಾವುದೋ ಮನೆಯಲ್ಲಿ ಸ್ವಲ್ಪ ಹರಿಶಿನ ಪುಡಿ ಹಚ್ಚಿ , ನೀರು ಕುಡಿಸಿ  , ಸ್ವಲ್ಪ ಸಮಯದ ನಂತರ ನನ್ನನ್ನು ಕೂಡಿಸಿಕೊಂಡು ಅವರು ಬೈಸಿಕಲ್ ತಳ್ಳಿಕೊಂಡೆ ಆಸ್ಪತ್ರೆ ತಲುಪಿದ್ದರು. ಆಸ್ಪತ್ರೆಗೆ ಬಂದದ್ದು ಯಾವುದೊ ಕಾರಣಕ್ಕೆ , ಚಿಕಿತ್ಸೆ ಕೊಡಬೇಕಾಗಿದ್ದು ಮತ್ಯಾವುದೋ ಕಾರಣಕ್ಕೆ. ಅಂತೂ ರಾತ್ರಿ ಯ ವೇಳೆಗೆ ಮನೆ  ತಲುಪಿದೆವು . "ತುಂಟ ಅಂದ್ರೆ ತುಂಟ ಅಂತಿಂತ ತುಂಟ ಅಲ್ಲ"  ಅಂತ ಎಲ್ಲಾ ಬೈದು ಮರುಗಿ ಅಳುವವರೇ. ಇದು ನನ್ನ ಬಾಲ್ಯದಲ್ಲಿ ನಡೆದ ಒಂದು ಘಟನೆ. ಇಂದಿಗೂ ಆ ಬಲಗಾಲ ಹಿಮ್ಮಡಿಯಲ್ಲಿ ಆದ ಆ ಗಾಯ ನನ್ನನ್ನು ಗುರುತಿಸಲಿಕ್ಕೆ  ಒಂದು  ಗುರುತಿನ      ಮಾರ್ಕ್ ಆಗಿ ಅನೇಕ ಅಪ್ಪ್ಲಿಕೆಶನ್ ಗಳನ್ನು ಅಲಂಕರಿಸಿದೆ. 
          
ಇವಿಸ್ಟೇ ಅಲ್ಲ  ನನ್ನ ಬಾಲ ಲೀಲೆಗಳು ಅಪಾರ. ಅವೆಲ್ಲವನ್ನು ಈಗ ನೆನಪಿಸಿಕೊಂಡಾಗ ಅವೆಲ್ಲ ಬದುಕಿನ ಮೇಸ್ಟ್ರು ಗಳಾಗಿವೆ, ಅವುಗಳಿಂದ ಕಲಿಯುವುದು ಬಹಳಸ್ಟಿದೆ. ಆದರೆ ನಾವು ದೊಡ್ಡವರಾಗುತ್ತಾ ಹೋದ ಹಾಗೆ ನಮ್ಮೊಳಗಿನ " ಮಗು" ವನ್ನು ಕೊಂದುಬಿಡುತ್ತೇವೆ ಏನೋ ಅನ್ನಿಸುತ್ತದೆ. 
         
  ಇಸ್ಟೆಲ್ಲಾ ನೆನಪಾಗಿದ್ದು, ನನ್ನ ಮುದ್ದು ಕಂದಮ್ಮ " ಹಿಮಘ ತೇಜಸ್ " ನ ತುಂಟಾಟಗಳನ್ನು ನೋಡಿ. 8 ತಿಂಗಳ ಮನುಷ್ಯ......! , ಹಾಸಿಗೆಯಲ್ಲಿಯೇ ಈಜುತ್ತಾನೆ,ಪಟ ಪಟ ಕೈ ಕಾಲು ಬಡಿದು ಡ್ಯಾನ್ಸ್ ಮಾಡುತ್ತಾನೆ, ಮುಖಕ್ಕೆ ಹತ್ತಿರ ಇಟ್ಟು ಕೊಂಡರೆ ಕೆನ್ನೆಗೆ ರಪ ರಪ, ಹಲ್ಲೆ ಹುಟ್ಟಿಲ್ಲದ ಬಾಯಿಯಲ್ಲಿ, ತಾ ತಾ, ಆ...ಮ... ,ಆಮ್...,ಕೀ..........ಮತ್ತು ಅವನದೇ ಸಂಗೀತ ಹೇಳುತ್ತಾನೆ, ರಾಮ ರಾಮ ಎಂದು ನಾವು ಹೇಳಿದರೆ ಅವನು ಪುಟ್ಟ ಎರಡು ಕೈಗಳನ್ನು ಒಂದಕ್ಕೊಂದು ಬಡಿಯುತ್ತಾ ಭಜನೆ ಮಾಡುತ್ತಾನೆ....8 ತಿಂಗಳ ಮನುಷ್ಯ ....! 


ಅಬ್ಬಾ.. ಎಂತಹ ಮುಗ್ದ ನಗು, ತುಂಟಾಟ...! ಇಂದು ನಾನು ಅಪ್ಪನಾಗಿದ್ದೇನೆ, ಅಪ್ಪನಾದ ಮೇಲೆ ನಾನೇ ಮಗುವಾಗಿದ್ದೇನೆ, ನನ್ನ ಮಗ ತುಂಟ ನಗೆ ಬೀರುತ್ತಿದ್ದಾನೆ, ಯಾವುದರ ಮುನ್ಸೂಚನೆಯೋ, ನನ್ನಪ್ಪ ನೆನಪಾಗುತ್ತಿದ್ದಾರೆ......!!!!!

6 comments:

ಸೀತಾರಾಮ. ಕೆ. / SITARAM.K said...

ಬಾಲ್ಯದ ನೆನಪ ಮೆಲುಕು ಮಧುರ. ಅಣ್ಣಂದಿರು ಸೈಕಲ್ಲಿನಲ್ಲಿ ನನ್ನನ್ನು ಸ್ಟಾಂಡ ಮೇಲೆ ಗೋಣಿ ಹಾಕಿ ಚಕ್ಕಲಿ-ಮಕ್ಕಳಿ ಕೂಡಿಸಿಕೊಂಡು ತಿರುಗಿಸೋದು ಜ್ಞಾಪಕವಾಯಿತು. ತೀರಾ ಸಣ್ಣವನಿದ್ದಾಗ ಮುಂದಿನ ರಾಡಿನ ಸಣ್ಣ ಸೀಟಲ್ಲಿ ಕೂತಾಗ ನನ್ನ ಕಾಲು ಚಕ್ರಕ್ಕೆ ಸಿಕ್ಕಿತ್ತು. ಸಧ್ಯ ಗಾಯ ಆಗಿರಲಿಲ್ಲ. ಊದಿಕೊಂಡಿತ್ತು!
ಧನ್ಯವಾದಗಳು.

anitha said...

ತು೦ಬಾ ಚೆನ್ನಾಗಿದೆ

*ಚುಕ್ಕಿ* said...

ತಮ್ಮೆಲ್ಲರ ಅನಿಸಿಕೆಗಳಿಗೆ ಧನ್ಯವಾದಗಳು . ಅನುಭವದಿಂದ ಕಲಿತ ಪಾಠ ದೊಡ್ಡದು.

Racham said...

Olleya Baraha. Chennagi barediddeeri. Nimma blog nodiralilla. Eega nodi khushiyaaytu. Heege bareyuttiri. Shubhavaagagli,

Nimma
Racham

*ಚುಕ್ಕಿ* said...

ಧನ್ಯವಾದ. ನನ್ನ ಅಕ್ಷರ ಲೋಕಕ್ಕೆ ತಮ್ಮಂತಹ ಅತಿಥಿಗಳು ಆಗಾಗ್ಗೆ ಬಂದು ಹೋದರೆ ಅದೆ ಪರಮಾನಂದ. ಸದಾ ಸ್ವಾಗತ.

ಪ್ರಗತಿ ಹೆಗಡೆ said...

ಇದೇ ಮೊದಲ ಬಾರಿಗೆ ನಿಮ್ಮ ಬ್ಲಾಗ್ ಓದಿದೆ... ಹಳೆಯ ದಿನದ ನೆನಪಾಯಿತು... ನಮ್ಮ ತಂದೆ ನನ್ನನ್ನು ಸೈಕಲ್ ಮುಂದಿರುವ ಚಿಕ್ಕ ಸೀಟಿನಲ್ಲಿ ಕೂರಿಸಿಕೊಳ್ಳುತ್ತಿದ್ದರು... ಆಗ ತುಂಬಾ ಸಾರಿ ಗಾಲಿಗೆ ಕಾಲು ಕೊಟ್ಟು ಗಾಯಮಾಡಿಕೊಂಡಿದ್ದೇನೆ... ಹೀಗೆ ಯಾವುದೋ ವಿಷಯಕ್ಕೆ ಡಾಕ್ಟರ್ ಬಳಿ ಹೋಗುವ ಬದಲು ಮತ್ಯಾವುದೋ ವಿಷಯಕ್ಕೆ ಹೋಗುವಂತಾಗಿದೆ... :-)