Thursday, February 9, 2012

ಭರವಸೆಯಿರಲಿ ಬದುಕಿನಲಿ ,

ಡಿಯರ್ ಪ್ರೆಂಡ್ಸ್, ಜಗತ್ತಿನಲ್ಲಿ ಯಾವುದು ಅಸಾದ್ಯವಲ್ಲ. ಅಸಾದ್ಯಗಳನ್ನೆಲ್ಲ ಸಾಧ್ಯವಾಗಿಸಿದ ಹಲವು ಸಾಮಾನ್ಯರಾದ 
ಅಸಮಾನ್ಯ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ.  ಹನುಮಂತ ಲಂಕೆಗೆ ಹಾರಲು ಮೊದಮೊದಲು ಅಂಜುತ್ತಿದ್ದ, 
ಆ ಸಂದರ್ಬದಲ್ಲಿ ಜಾಂಬವಂತ ಎಂಬ ಕರಡಿ ಅವನ ಶಕ್ತಿ  ಸಾಮರ್ಥ್ಯಗಳನ್ನು ಅವನಿಗೆ ತಿಳಿಸಿ, ಹುರಿದುಂಬಿಸಿದಾಗ ಅವನು 
ಸಮುದ್ರವನ್ನು ಹಾರಿದ.
 

ಭರವಸೆಯಿರಲಿ  ಬದುಕಿನಲಿ ,
ಅದೊಂದಿದ್ದರೆ ಸಾಕು , ಜೊತೆಗೆ ಬರುವುದು  ಎಲ್ಲವು  ,
ಅಮವಾಸೆ ನಂತರ ಹುಣ್ಣಿಮೆ ಬರಲೇಬೇಕು,
ಕತ್ತಲೆಯೇ ಉತ್ತರವಲ್ಲ ನಿಮ್ಮೆಲ್ಲ ಪ್ರಶ್ನೆಗಳಿಗೆ, 
ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ ಈ ಜಗದಲಿ,
ಶ್ರೀ ಕೃಷ್ಣ ಹೇಳಲಿಲ್ಲವೇ  ಆದದ್ದೆಲ್ಲ ಒಳಿತೆ ಆಯಿತೆಂದು ,
ಭರವಸೆಯಿರಲಿ ಬದುಕಿನಲಿ,
ಸೂರ್ಯ ಮುಳುಗಿದ ನಂತರ ಚುಕ್ಕಿಗಳು ,ಬೆಳಗುವುದಿಲ್ಲವೇ ಭುವಿಯ, 
ಎಂತೆನ್ತಹವರು ಇರುವರು  ಜಗದಲಿ,
ಮಾಡಿಹರು ಅಪ್ರತಿಮ ಸಾಧನೆಯ ,ಎಲ್ಲ ವೈರುದ್ಯಗಳ ನಡುವೆ,
ಅಂಜುವೆ ಏಕೆ ಮನವೇ, 
ಇರುವ ಅವಕಾಶಗಳ ಬಳಸಿಕೋ, 
ಎದೆಯನ್ನು ಉಕ್ಕಾಗಿಸಿ ,ಬುದ್ದಿಶಕ್ತಿಯ  ಅಸ್ತ್ರ ಬಳಸಿ ,
ವಿಧಿಗೆ ಸವಾಲೆಸಿ.
ಯಾವುದು ಅಸಾದ್ಯವಲ್ಲ ಈ ಜಗದಲಿ,
ಭರವಸೆಯಿರಲಿ ಈ ಬದುಕಿನಲಿ,
ನಂಬಿಕೆಯಿರಲಿ ನಿನ್ನ ಶಕ್ತಿ ,ಸಾಮರ್ಥ್ಯಗಳಲಿ, 
ಬದುಕಾಗಲಿ ನೀ ಬಯಸಿದಂತೆ,
ಬಾಳು ಬೆಳಕಾಗಲಿ.


Wednesday, May 25, 2011

"ಸಾವು" ಎಂಬ ಮಾಯದ ಬೆನ್ನೇರಿ...!!!

ಪ್ರತಿಯೊಬ್ಬರ ಬದುಕಿನಲ್ಲಿ ಬಹಳಷ್ಟು ಅವಕಾಶಗಳು, ಆಯ್ಕೆಗಳಿವೆ . ಹಾಗೆ ಬದುಕಲೂ ಕೂಡ. ಆದರೆ ವಿಧಿಯು ಎಲ್ಲ ಆಯ್ಕೆ, ಅವಕಾಶಗಳನ್ನು ಕಸಿದುಕೊಂಡು "ಸಾವು" ಎಂಬ ಎರಡಕ್ಷರದ ನೋವನ್ನು ಬಡವರ ಪಾಲಿಗೆ ಬಳುವಳಿಯಾಗಿ ನೀಡಿದರೆ, ಅದಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ.

ನನ್ನ ಪ್ರಕಾರ "ಸಾವು" ಮನುಷ್ಯನನ್ನು ಪರಿಪೂರ್ಣನಾಗಿಸುತ್ತದೆ. ಬದುಕಿನ ಎಲ್ಲಾ ಮಗ್ಗಲುಗಳನ್ನು ಬದಲಿಸಿ ನೆಮ್ಮದಿಯಾಗಿ ಸಾಯುವ ಮನುಷ್ಯ ನಿಜಕ್ಕೂ ಪರಿಪೂರ್ಣ. ಸಾವು ಎಂಬ ಮಾಯೆ ಯ ಹಿಂದೆ ಎಲ್ಲವು ಶೂನ್ಯ.  ಸಾವು ಎಂಬುದರ ಅನುಭವವೇ ಇಲ್ಲದ ಹಾಗೆ ಸತ್ತು ಬಿಡಬೇಕು. ರಾತ್ರಿ ನಿದ್ರೆ ಮಾಡುತ್ತಿರುವಾಗ, ಅಮ್ಮಾಳ ತೊಡೆಯಲ್ಲಿ ತಲೆ ಇತ್ತು ಮಲಗಿರುವಾಗ, ಸಂಗಾತಿಯ ಅಪ್ಪುಗೆಯಲ್ಲಿ, ಮಕ್ಕಳ ಮುದ್ದಾಟದಲ್ಲಿ ,ದೇವರನ್ನು ಪ್ರಾರ್ಥಿಸುವಾಗ , ನಮಗೆ ಗೊತ್ತಾಗದ ಹಾಗೆ ಸಾವು ನಮ್ಮನ್ನ ಆವರಿಸಬೇಕು. ಆದರೆ ಸಾವು ಎಂಬ ರಕ್ಕಸ ದೈತ್ಯ ರೂಪ ತಾಳಿ , ನಮ್ಮನ್ನ ಅಟ್ಟಾಡಿಸಿ, ದೇಹವನ್ನು ಕೃಶವಾಗಿಸಿ, ಮನಸ್ಸನ್ನು ಕುಗ್ಗಿಸಿ, ಭಯ ಹುಟ್ಟಿಸಿ ನಮ್ಮನ್ನ ಆವರಿಸಿದರೆ, ಅಬ್ಬಾ..! ಅದಕ್ಕಿಂತ ದೊಡ್ಡ ನರಕ ಮತ್ತೊಂದಿಲ್ಲ.


ನಮ್ಮ ಮನೆಯ ಹಿರಿಕ , ನನ್ನ ದೊಡ್ಡಪ್ಪ ಸಾವಿನ ದಿನಗಳನ್ನು ಎಣಿಸುತ್ತಾ, ಹಾಸಿಗೆಯಲ್ಲಿ ಕೃಶವಾಗಿ  ಮಲಗಿದ್ದಾನೆ. ಅವರ ದೇಹದ ಎರಡು ಮೂತ್ರ ಜನಕಾಂಗಗಳು (ಕಿಡ್ನಿ)

Thursday, September 30, 2010

"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ".

"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ".  ಈ ಸಾಲನ್ನು ನಾನು ಬರೆಯಲಿಕ್ಕೆ ಸಾಧ್ಯವಾದುದು , ಒಬ್ಬ ಬಿಹಾರಿ ಮಿತ್ರನ ಅನುಭವದಿಂದ.




ಚರಿತ್ರೆ (ಇತಿಹಾಸ ) ವುಳ್ಳ , ಚಾರಿತ್ರ್ಯ ವಿಲ್ಲದ ರಾಜ್ಯ ಬಿಹಾರ .ಬಿಹಾರ ಭಾರತೀಯ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹಾಗೆಯೇ ಕ್ರೌರ್ಯ ಮತ್ತು ತನ್ನ  ಅಸಂಸ್ಕೃತಿ ಯಿಂದ ಮನೆಮಾತಾಗಿದೆ . ಆದರೂ ಅಲ್ಲಿನ ಜನ ದೇಶದ ಅತ್ಯುನ್ನತ ಹುದ್ದೆಗಳಾದ ನಾಗರಿಕ ಸೇವೆಗಳನ್ನು ಅಲಂಕರಿಸುತ್ತಿದ್ದಾರೆ. ರೈಲ್ವೆ ಇಲಾಖೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಬಿಹಾರ ರಾಜ್ಯದಲ್ಲಿ ಯಾವ ಹೊತ್ತು ಯಾವ ಅನಾಹುತ ಘಟಿಸುತ್ತದೋ ಹೇಳಲಿಕ್ಕಾಗದು. ಶೇ 85 ರಷ್ಟು ಹಳ್ಳಿಗಳು ಬಿಹಾರವನ್ನು ಆವರಿಸಿವೆ. ಹಿಂದುಳಿದ ರಾಜ್ಯ . ಇಸ್ಟೆಲ್ಲಾ ಇದ್ದು ಇದೆಲ್ಲ ಬಿಹಾರಿಗಳಿಗೆ ಸಾದ್ಯವಾದುದಾದರೂ ಹೇಗೆ ?! 

ನನ್ನ ಬಿಹಾರಿ ಗೆಳೆಯ ಕೊಟ್ಟ ಉತ್ತರ ಇಸ್ಟೇ ," ಡಿಯರ್ ಪ್ರೆಂಡ್ ಬಿಹಾರದಲ್ಲಿ ವಿದ್ಯುತ್ ಪೂರೈಕೆ ಸರಿ ಇಲ್ಲ ಅಂಡ್ ಇಟ್  ಇಸ್ ನಾಟ್ ಎ   ಕಲ್ಚರಡ್    ಸ್ಟೇಟ್ . ಜನಗಳ ಬಳಿ ದುಡ್ಡಿಲ್ಲ. ಮೂರು ನಾಲ್ಕು ಜನ ಯೂಥ್ಸ್ ಒಂದು ಕಡೆ ಸೇರಿ ಓದಿಕೊಳ್ತೇವೆ. ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸ್ತೇವೆ. ಎಲ್ಲಾ ತರದ ಪರೀಕ್ಷೆ ತಕ್ಕೊಲ್ತೆವೆ. ಮೊದಲನೇ ಸಲ ಆಗದೆ ಇದ್ದರೆ , ಎರಡು ಅಥವಾ ಮೂರನೇ ಪ್ರಯತ್ನದಲ್ಲಿ ವಿಜಯ ನಮಗೊಲಿಯುತ್ತದೆ. ಹೊಟ್ಟೆ ತುಂಬಿದರೆ ಯಾವ ಯೋಚನೆ ಕೂಡ ತಲೆಗೆ ಹತ್ತದು. ಮನರಂಜನೆ ಇದ್ದರೆ ಯಾವ ಚಿಂತೆ ಕೂಡ ಸುಳಿಯದು. ಇದು ಯಾವುದು ಬಿಹಾರದಲ್ಲಿಲ್ಲ. ಅಸ್ಟೊಂದು ಸಮಯ ಏನ್ ಮಾಡೋದು.... ಪ್ರಿಪೇರ್   , ಪ್ರಿಪೇರ್ ,ಪ್ರಿಪೇರ್ ಅಂಡ್ ವೀ ಗಾಟ್ ಸಕ್ಸೆಸ್ ."

ನಿಜಕ್ಕೂ ಆತನ ಮಾತು ನನ್ನಲ್ಲಿ ಸ್ಫೂರ್ತಿ ತುಂಬಿತು. ಎಲ್ಲಾ ಸರಿಯಿದ್ದೂ ಸಾಧಿಸುವವರೇ ವಿರಳ . ಅಂತದ್ದರಲ್ಲಿ ತಮ್ಮ ರಾಜ್ಯದ ದೌರ್ಭಾಗ್ಯವನ್ನು ,ದುರ್ಬಲತೆಯನ್ನು ಹಳಿಯದೆ ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡು ಸಾಧಿಸಿದ್ದಾರೆ . ನಾವು ಕೂಡ ಅದೆ ಹಾದಿಯಲ್ಲಿ ಸಾಗೋಣ. ಸಾಧನೆಯ ಹಾದಿಗೆ ನಮ್ಮ ಕರ್ನಾಟಕ ಪೂರಕವಾಗಿದೆ. ಆದರೆ ನಮ್ಮ ಮನಸ್ಸುಗಳು ಬದಲಾಗಬೇಕಿದೆ. ಕನ್ನಡ ಭಾಷೆಯ ಪ್ರೇಮದೊಟ್ಟಿಗೆ  ಇತರ ಭಾಷೆಯ ಜ್ಞಾನ ವನ್ನು ಮೈ ಗೂಡಿಸಿಕೊಳ್ಳೋಣ. ಬೆಳೆಯೋಣ. ಈ ಜಗಕೆ ಬೆಳಕಾಗೋಣ.

Friday, August 20, 2010

*....ಅಂದು ನಾನು ಮಗುವಾಗಿದ್ದೆ..ಈಗ ಮಗುವಿನ ತಂದೆ ...*


ಅಂದು ನಾನು ಮಗುವಾಗಿದ್ದೆ. ಜ್ವರ ಮೈ ಯನ್ನು ಬಿಸಿಯೇರಿಸಿತ್ತು. ಅಪ್ಪ ಶಾಲೆಗೇ ರಜೆ ಹಾಕಿ 3 ಕಿಲೋ ಮೀಟರ್ ದೂರದಲ್ಲಿರೋ ಹೋಬಳಿ ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಸೈಕಲ್ ನಲ್ಲಿ ನನ್ನನ್ನು ಹಿಂಬದಿಯಲ್ಲಿ ಕೂರಿಸಿಕೊಂಡು , ಮಗ ಹುಷಾರಾದರೆ ಎಂಬ ಗುರಿಯನ್ನು ಮುಂದಿಟ್ಟುಕೊಂಡು ಸೈಕಲ್ ಪೆಟಲ್ ನ್ನು ತುಳಿಯುತ್ತಿದ್ದರು. ಅಪ್ಪನ ಶಾಲೆ ಕಾವೇರಿ ನದಿಯ ಆಚೆಗಿನ ಊರಿನಲ್ಲಿತ್ತು. ನಮ್ಮ ಹಳ್ಳಿ ಯಿಂದ 1 ಕಿ. ಮೀ .  ದೂರದಲ್ಲಿರುವ ನದಿಯನ್ನು  ತಲುಪಲು ಸೈಕಲ್ಲು,  ನಂತರ ಹರಗಲ (ಹಾಯಿ ದೋಣಿ ಅಥವಾ ತೆಪ್ಪ ಅಂತಲೂ ಕರೆಯುತ್ತಾರೆ ) ದ ಮೇಲೆ ಬೈಸಿಕಲ್ ನ್ನು ಇಟ್ಟು ನದಿಯನ್ನು ಹಾದು ನಂತರ ಅಲ್ಲಿಂದ 2 ಕಿ  .ಮೀ. ದೂರದ ಶಾಲೆಗೇ ಬೈಸಿಕಲ್ ತುಳಿಯುತ್ತ  ತೆರಳುತ್ತಿದ್ದರು. ಬರುವಾಗಲೂ ಹಾಗೆಯೇ. ಈ ಮಧ್ಯೆ ನಮಗೇನಾದರೂ ಹುಷಾರು ಇಲ್ಲದಿದ್ದರೆ ಮತ್ತೆ ನಮ್ಮೂರಿನಿಂದ ೩ ಕಿ ಲೋ ಮೀಟರ್ ದೂರದ ಪ್ರಯಾಣ. ಹೀಗಿತ್ತು ನನ್ನ ಬದುಕಿನ ಆಗಿನ ಕಾಲ . ಆ ದಿನ ಆಸ್ಪತ್ರೆಗೆ ತೋರಿಸಲು ಅಪ್ಪನ ಬಳಿ ಕೈ ಯಲ್ಲಿ ಕಾಸಿರಲಿಲ್ಲ. ತಿಂಗಳ ಕೊನೆ ದಿನ ಆಗಿನ ಕಾಲದ ಪ್ರೈಮರಿ ಮಾಸ್ತರರ ಸಂಬಳ ಎಷ್ಟು ದಿನ ಜೆಬಿನಲ್ಲಿರುತ್ತಿತ್ತು ?!. ನನ್ನ ತಂದೆಯ ತಂದೆ ,ಅರ್ಥಾತ್ ತಾತ ಜಿಪುಣ ಶಿಕಾಮಣಿ, ನನ್ನ ಮೈಯ ಬಿಸಿ ಜ್ವರ ಆತನಿಗೆ ಅರ್ಥವಾಗಲಿಲ್ಲ. ನಮ್ಮ ತಂದೆ ಮತ್ತು  ತಾಯಿ ಒಂದೇ ಊರಿಗೆ ಸೇರಿದವರು. ಜಮೀನು ಮತ್ತು ಮನೆ ಅಕ್ಕ ಪಕ್ಕದಲ್ಲಿಯೇ. ನಮ್ಮ ತಾಯಿಯ ತಂದೆ, ಅಸ್ಟೊ   ಇಷ್ಟು ಹೊಂದಿಸಿ ನಮ್ಮ ತಂದೆಗೆ ಕೊಟ್ಟರು.ಅಂತೂ ಅಪ್ಪ ನನ್ನನ್ನು ತಮ್ಮ ಐರಾವತದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಹಿಂಬದಿಯಲ್ಲಿ  ಚಕ್ಲು ಬಕ್ಲು (ಎರಡು ಕಾಲನ್ನು ಮಡಚಿ, ಸೈಕಲ್ ಕ್ಯಾರಿಯರ್ ಮೇಲೆ ಟವಲ್ ಇಟ್ಟು ಅದರ  ಮೇಲೆ  ಕೂತಿದ್ದೆ) ಹಾಕಿ ಕೂತಿದ್ದ  ನಾನು , ಬಲಗಾಲನ್ನು ಹೇಗೋ ಕೆಳಗೆ ಬಿಟ್ಟು ಬಿಟ್ಟಿದ್ದೆ . ಬಲಗಾಲ ಹಿಮ್ಮಡಿ ಬೈಸಿಕಲ್ ನ ಚಕ್ರಕ್ಕೆ ಸಿಲುಕಿ ಎರಡು ಭಾಗವಾಗಿಬಿಟ್ಟಿತ್ತು. ಸ್ವಲ್ಪ ದೂರ ಹೋದ ಮೇಲೆ ಸೋರುತ್ತಿದ್ದ ರಕ್ತ ವನ್ನು ಯಾರೋ ನೋಡಿ ಹೇಳಿದ ಮೇಲೆ , ಅಪ್ಪನಿಗೆ ಗೊತ್ತಾಗಿದ್ದು. ಅಲ್ಲೇ ಮಾರ್ಗ ಮಧ್ಯದ ಹಳ್ಳಿಯ ಯಾವುದೋ ಮನೆಯಲ್ಲಿ ಸ್ವಲ್ಪ ಹರಿಶಿನ ಪುಡಿ ಹಚ್ಚಿ , ನೀರು ಕುಡಿಸಿ  , ಸ್ವಲ್ಪ ಸಮಯದ ನಂತರ ನನ್ನನ್ನು ಕೂಡಿಸಿಕೊಂಡು ಅವರು ಬೈಸಿಕಲ್ ತಳ್ಳಿಕೊಂಡೆ ಆಸ್ಪತ್ರೆ ತಲುಪಿದ್ದರು. ಆಸ್ಪತ್ರೆಗೆ ಬಂದದ್ದು ಯಾವುದೊ ಕಾರಣಕ್ಕೆ , ಚಿಕಿತ್ಸೆ ಕೊಡಬೇಕಾಗಿದ್ದು ಮತ್ಯಾವುದೋ ಕಾರಣಕ್ಕೆ. ಅಂತೂ ರಾತ್ರಿ ಯ ವೇಳೆಗೆ ಮನೆ  ತಲುಪಿದೆವು . "ತುಂಟ ಅಂದ್ರೆ ತುಂಟ ಅಂತಿಂತ ತುಂಟ ಅಲ್ಲ"  ಅಂತ ಎಲ್ಲಾ ಬೈದು ಮರುಗಿ ಅಳುವವರೇ. ಇದು ನನ್ನ ಬಾಲ್ಯದಲ್ಲಿ ನಡೆದ ಒಂದು ಘಟನೆ. ಇಂದಿಗೂ ಆ ಬಲಗಾಲ ಹಿಮ್ಮಡಿಯಲ್ಲಿ ಆದ ಆ ಗಾಯ ನನ್ನನ್ನು ಗುರುತಿಸಲಿಕ್ಕೆ  ಒಂದು  ಗುರುತಿನ      ಮಾರ್ಕ್ ಆಗಿ ಅನೇಕ ಅಪ್ಪ್ಲಿಕೆಶನ್ ಗಳನ್ನು ಅಲಂಕರಿಸಿದೆ. 
          
ಇವಿಸ್ಟೇ ಅಲ್ಲ  ನನ್ನ ಬಾಲ ಲೀಲೆಗಳು ಅಪಾರ. ಅವೆಲ್ಲವನ್ನು ಈಗ ನೆನಪಿಸಿಕೊಂಡಾಗ ಅವೆಲ್ಲ ಬದುಕಿನ ಮೇಸ್ಟ್ರು ಗಳಾಗಿವೆ, ಅವುಗಳಿಂದ ಕಲಿಯುವುದು ಬಹಳಸ್ಟಿದೆ. ಆದರೆ ನಾವು ದೊಡ್ಡವರಾಗುತ್ತಾ ಹೋದ ಹಾಗೆ ನಮ್ಮೊಳಗಿನ " ಮಗು" ವನ್ನು ಕೊಂದುಬಿಡುತ್ತೇವೆ ಏನೋ ಅನ್ನಿಸುತ್ತದೆ. 
         
  ಇಸ್ಟೆಲ್ಲಾ ನೆನಪಾಗಿದ್ದು, ನನ್ನ ಮುದ್ದು ಕಂದಮ್ಮ " ಹಿಮಘ ತೇಜಸ್ " ನ ತುಂಟಾಟಗಳನ್ನು ನೋಡಿ. 8 ತಿಂಗಳ ಮನುಷ್ಯ......! , ಹಾಸಿಗೆಯಲ್ಲಿಯೇ ಈಜುತ್ತಾನೆ,ಪಟ ಪಟ ಕೈ ಕಾಲು ಬಡಿದು ಡ್ಯಾನ್ಸ್ ಮಾಡುತ್ತಾನೆ, ಮುಖಕ್ಕೆ ಹತ್ತಿರ ಇಟ್ಟು ಕೊಂಡರೆ ಕೆನ್ನೆಗೆ ರಪ ರಪ, ಹಲ್ಲೆ ಹುಟ್ಟಿಲ್ಲದ ಬಾಯಿಯಲ್ಲಿ, ತಾ ತಾ, ಆ...ಮ... ,ಆಮ್...,ಕೀ..........ಮತ್ತು ಅವನದೇ ಸಂಗೀತ ಹೇಳುತ್ತಾನೆ, ರಾಮ ರಾಮ ಎಂದು ನಾವು ಹೇಳಿದರೆ ಅವನು ಪುಟ್ಟ ಎರಡು ಕೈಗಳನ್ನು ಒಂದಕ್ಕೊಂದು ಬಡಿಯುತ್ತಾ ಭಜನೆ ಮಾಡುತ್ತಾನೆ....8 ತಿಂಗಳ ಮನುಷ್ಯ ....! 


ಅಬ್ಬಾ.. ಎಂತಹ ಮುಗ್ದ ನಗು, ತುಂಟಾಟ...! ಇಂದು ನಾನು ಅಪ್ಪನಾಗಿದ್ದೇನೆ, ಅಪ್ಪನಾದ ಮೇಲೆ ನಾನೇ ಮಗುವಾಗಿದ್ದೇನೆ, ನನ್ನ ಮಗ ತುಂಟ ನಗೆ ಬೀರುತ್ತಿದ್ದಾನೆ, ಯಾವುದರ ಮುನ್ಸೂಚನೆಯೋ, ನನ್ನಪ್ಪ ನೆನಪಾಗುತ್ತಿದ್ದಾರೆ......!!!!!

Friday, August 13, 2010

ಒಂದು ಲೇಖನಿ,ಹಲವು ಕಾಲಿ ಕಾಗದಗಳು, ಮತ್ತು ನಾನು...!!!

ಡಿಯರ್ ಪ್ರೆಂಡ್ಸ್ ನಮಸ್ತೆ,

ಪ್ರತಿ ಕ್ಷಣ ಬದುಕನ್ನ, ಈ ಪ್ರಪಂಚವನ್ನ ಮತ್ತು ನನ್ನನ್ನ ಪ್ರೀತಿಸುವ  ಮನುಷ್ಯ ನಾನು. "ನನ್ನನ್ನ ನಾನು ಪ್ರೀತಿಸುವುದಕ್ಕೆ ಸಾಧ್ಯ ಆದರೆ ಇಡೀ ಜಗತ್ತನ್ನು ಮತ್ತು ಮಿಕ್ಕೆಲ್ಲವನ್ನೂ  ಪ್ರೀತಿಸಬಹುದು"  ಎಂಬುದು ನನ್ನ ನಂಬಿಕೆ. ಈ ಪ್ರೀತಿಯ   ಯಾನದಲ್ಲಿ  ನೂರಾರು ಭಾವಗಳು ನನ್ನನ್ನ ಪುಳಕಿತವನ್ನಗಿ ಮಾಡಿವೆ. ಆತ್ಮ ಶಕ್ತಿ ಮತ್ತು ಆತ್ಮ ಗೌರವಗಳೇ ನನ್ನ ಶಕ್ತಿ. ಇವು ಕೆಲವರಿಗೆ ಸಾಧನೆಯಾಗಿ, ಮತ್ತೆ ಕೆಲವರಿಗೆ ಸ್ಪೂರ್ತಿಯಾಗಿ , ಕೆಲವರಿಗೆ ಅಹಂಕಾರವಾಗಿ ಕಂಡಿವೆ. ಅವರವರ ಭಾವಕ್ಕೆ ಅವರವರ ಪ್ರೀತಿಗೆ " ನನ್ನ ಕನ್ನಡಿಯ ಬಿಂಬ "  ಕಂಡಿದೆ. ಆದರೆ ನನಗನಿಸುವುದಿಸ್ಟೇ .  ನನ್ನ ಬಳಿ ಹಲವು ಕಾಲಿ ಕಾಗದಗಳಿವೆ , ಒಂದು ಲೇಖನಿ ಇದೆ ಮತ್ತು ನಾನಿದ್ದೇನೆ.

ಹಾಗಾಗಿಯೇ ನನಗನಿಸಿದ ಭಾವನೆಗಳು, ನಾನು ಕಂಡು ಕೊಂಡ ಸತ್ಯಗಳು, ನನ್ನ ಅನುಭವಕ್ಕೆ ನಿಲುಕಿದ ಸಂಗತಿಗಳನ್ನು " ವಿಶ್ವಮುಖಿ " ಯಾಗಿ ಇಲ್ಲಿ ದಾಖಲಿಸುತ್ತಿದ್ದೇನೆ. ನಿಮಗನಿಸಿದ್ದನ್ನು ಖಂಡಿತ ತಿಳಿಸಿ. ತಿಳಿಯುವುದು , ಬೆಳೆಯುವುದು, ಗೊತ್ತಿರುವುದ ಹಂಚಿಕೊಳ್ಳುವುದು, ಜೊತೆಗೂಡಿ ನಡೆಯುವುದು ವಿಶ್ವಮುಖಿಯ  ಯಾನದ ಅವಿಬಾಜ್ಯ ಅಂಗಗಳು. 

೦೧. ನಾನು ಸಮಾಧಾನಿಸುವವರೆಗಿನ ಕಣ್ಣೀರನ ಹೊಣೆ   ನನ್ನದು. ನಂತರ ನೀ  ಸುರಿಸುವ ಕಣ್ಣೀರಿಗೂ, ನನಗೂ ಸಂಬಂಧವಿಲ್ಲ. ನಮ್ಮ ಸಂಬಂಧದ  ಅನೂನ್ಯತೆ  ಇಸ್ಟೇ ಎಂದು ತಿಳಿಯುವೇನು. 
೦೨. ಕೆಲವು ಸಂಕಟಗಳು/ನೋವುಗಳು  ನಮ್ಮ ಗುರುಗಳು. ಅವು ನಮ್ಮನ್ನ ಅರ್ಥೈಸಿಕೊಳ್ಳಲು , ತಿದ್ದಿಕೊಳ್ಳಲು, ಮುನ್ನಡೆಯಲು ಅನುಕೂಲಕರ.  
೦೩. ಪ್ರೀತಿ ಒಂದು ಕ್ರಿಯೆ ಅಲ್ಲ. ಅದು ನನಗೆ ಉಸಿರಾಟದಸ್ಟೇ ಸಹಜ .
೦೪. ಭಗ್ನ ಪ್ರೀತಿಯು ಕೂಡ ಸಾಧನೆಗೆ ಸ್ಪೂರ್ಥಿಯಾಗಬಲ್ಲದು.

Sunday, October 26, 2008

ವಿವೇಕ ಕಿಡಿ..ಸೇವೆಗೆ ಕರೆ


" ಐಶ್ವರ್ಯ ಹೀನರಾದ,  ನಿರ್ಭಾಗ್ಯರಾದ     , ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪದದಳಿತರಾದ, ಉಪವಾಸದಿಂದ ನರಳುವ,  ಕಾದಾಡಿ  ಅಸೂಯೆ ಪಡುವ ನಮ್ಮ ದೇಶದವರನ್ನು ಪ್ರೀತಿಸಿದರೆ, ಅವರು ಮತ್ತೊಮ್ಮೆ ಮೇಲೆ ಏಳುವರೆಂದು    ನಾನು ನಂಬುತ್ತೇನೆ. ನೂರಾರು ಜನ ಉದಾರ ಹೃದಯರಾದ ಸ್ತ್ರೀ ಪುರುಷರು ಜೀವನದ ಸುಖ ವನ್ನು ಅನುಭವಿಸಬೇಕೆಂಬ ಆಸೆ ಎಲ್ಲವನು  ತೊರೆದು, ಬಡತನ ಅಜ್ಞಾನ ಕೂಪದಲ್ಲಿ ದಿನೇ ದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೊಸುಗವಾಗಿ ತವಕಿಸಿ ಯಾವಾಗ ಕೈಲಾದ ಮಟ್ಟಿಗೆ ಕಸ್ಟ  ಪಡುವರೋ  , ಆಗ ಮಾತ್ರ ಭರತ  ಖಂಡ  ಮೇಲೆ ಏಳುವುದು" ........ಸ್ವಾಮಿ ವಿವೇಕಾನಂದರು 

ಪ್ರೀತಿಯ ಪುಟ್ಟು , 

ದೊಡ್ಡವರು ಹೇಳಿರೋ ಮಾತ್ ಗಳನ್ನೆಲ್ಲ ಕಾರ್ಯರೂಪಕ್ಕೆ ತಂದರೆ ಈ ಸಮಾಜ, ಪರಿಸರ, ನಮ್ಮ ಮನೆ - ಮನಸ್ಸು ಎಷ್ಟು ಚಂದ ಇರುತ್ತಲ್ವಾ...?! ಅದೇ ಪ್ರಯತ್ನದಲ್ಲಿ  ನಮ್ಮ ಬದುಕಿನ ಗಾಲಿ ಚಲಿಸುತ್ತಿರಬೇಕು. ಏನಂತೀಯ..?!!!!!!!!   

ಇತಿ,
ನಿನ್ನ ಚುಕ್ಕಿ

Wednesday, May 28, 2008

ಚಿಕ್ಕ ಪುಟ್ಟ ಅಪಘಾತಗಳು ಆತ್ಮವಿಶ್ವಾಸವನ್ನು ಹೆಚ್ಸಿಸಲಿ ....ದೊಡ್ಡ ಆಘಾತಗಳನ್ನು ತಪ್ಪಿಸಲಿ..

ಪ್ರೀತಿಯ ಸಂಜೀವಿನಿ....ಹೇಗಿದ್ದಿಯ...?!

ನಾವು ಬಹಳಷ್ಟು ಬಾರಿ , " ಆ ಕೆಲಸಾನಾ , ಅದು ನನ್ನ ಕಾಲ ಕಿರು ಬೆರಳಿಗೂ ಸಮ ಇಲ್ಲ, ಮಾಡಿ ಬಿಸಾಕ್ತೇನೆ", ಹಾಗೆ, ಹೀಗೆ, ಅಂತಾ ಕೊರಳ ಪಟ್ಟಿಯನ್ನು ಮೇಲಕ್ಕೆ ಏರಿಸಿ ಬೊಬ್ಬೆ ಹೊಡೆಯುತ್ತಿರುತ್ತೇವೆ. ಹೃದಯಕ್ಕೆ ಮತ್ತು ಕಾಲ ಬೆರಳಿಗೆ ಅಜಗಜಾಂತರ ವ್ಯತ್ಯಾಸವನ್ನೇ ಕಲ್ಪಿಸಿಬಿಟ್ಟಿದ್ದೇವೆ. ನಮ್ಮ ದೇಹದ ಅಂಗಗಳಲ್ಲೇ ತಾರತಮ್ಯ ಮಾಡುವ ನಾವು " ಸಮಾನ ಸಮಾಜ" ವನ್ನ ಸೃಷ್ಟಿಸಲಿಕ್ಕಾದರೂ ಹೇಗೆ ಸಾದ್ಯ ಹೇಳು?! ಇರಲಿ ಬಿಡು,

ಮೊನ್ನೆ ಜೀವದ ಗೆಳೆಯ ರಾಘು ನ ಬಲ ಕಾಲಿನ ಪಾದದ ಮೇಲೆ ಬೆಂಗಳೂರಿನ ಸಿಟಿ ಬಸ್ಸೊಂದು ತನ್ನ ಚಕ್ರಗಳಿಂದ ಪಾದ ಪೂಜೆ ಮಾಡಿತು. ಬಲ ಕಾಲಿನ ಎರಡು ಬೆರಳುಗಳು ಪೂರ್ತಿ ಅಪ್ಪಚ್ಚಿಯಾದವು. ಇನ್ನೆರಡು ಬೆರಳುಗಳ ಮೂಳೆ ಮುರಿಯಿತು. ಸದ್ಯಕ್ಕೆ, 'ಹೆಬ್ಬೆರಳು' ಅವನ ಕಾಲಿನಲ್ಲಿದೆ. ಅವನನ್ನ ಆ ಸ್ಥಿತಿಯಲ್ಲ್ಲಿ ನೋಡುವವರೆವಿಗೂ ನನಗರ್ಥವಾಗಿರಲಿಲ್ಲ ನಮ್ಮ ದೇಹದ ಪ್ರತಿಯೊಂದು ಭಾಗವೂ ಎಸ್ಟು ಮುಖ್ಯ ಅಂತ.

'ಪುಟ್ಟು' ಈ ಸ್ಥೀಮಿತ ಅವಧಿಯ ಬದುಕಿನಲ್ಲಿ ಎಸ್ಟೊಂದು  ಬಗೆಯ ಅಪಘಾತಗಳು ಸಂಭವಿಸುತ್ತವೆ ಅಲ್ವಾ?! ಮಾನಸಿಕವಾಗಿ...ದೈಹಿಕವಾಗಿ... ! ಎತ್ತಿ ಮುದ್ದಾಡಿದ ಅಮ್ಮಾಳ ಕೈಗಳಿಗೆ ಪ್ಯಾರಲಿಸಿಸ್ ಅಟ್ಯಕ್ಕ್ಆಗುತ್ತೆ, ಅಪ್ಪ ಸುಳಿವಿಲ್ಲದೆ  ಸತ್ತು ಹೋಗ್ತಾನೆ, ಬೆಳೆದ ಮಗ ಅಪಘಾತ ದಲ್ಲಿ ತೀರಿ ಹೋಗ್ತಾನೆ, ಕೆಲವರು ಹಾದಿ ತಪ್ತಾರೆ, ಸಂಪತ್ತು ಕರಗಿ ಉತ್ತಮ ಅಂತಸ್ತಿನ ಜನರು ಬೀದಿಗೆ ಬೀಳ್ತಾರೆ, ನಂಬಿದ ಗೆಳೆಯ ಮೋಸ ಮಾಡಿ ಬಿಡ್ತಾನೆ, ಪ್ರೀತಿಸಿದ ಹುಡುಗಿಗೆ ಬೇರೆಯವನೋಟ್ಟಿಗೆ ಮದುವೆ ನಿಶ್ಚಯವಾಗಿರುತ್ತೆ, ಪರೀಕ್ಷೆಯಲ್ಲಿ ನಿರೀಕ್ಷೆಯ ಫಲಿತಾಂಶ ತಲೆ ಕೆಳಕಾಗಿರುತ್ತೆ, ಮುದ್ದು ನಾಯಿ ಮರಿ ಸತ್ತು ಹೋಗುತ್ತೆ, ಸಂಬಂದ ಗಳ ಸ್ವರೂಪವೇ ಬದಲಾಗಿಬಿಡುತ್ತೆ....ಅಬ್ಬಾ?!!!!!!!!!!! ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಈ ಆಘಾತಗಳೇ ಬದುಕನ್ನ ಕುಬ್ಜ ಗೊಳಿಸುತ್ತವೆ..ಬದುಕಿನ ಪ್ರೀತಿಯನ್ನೇ ಬತ್ತಿಸಿಬಿಡುತ್ತವೆ.

ಪುಟ್ಟು, ಈ ಆಘಾತಗಳಿಗಿಂತ " ಬದುಕು" ದೊಡ್ದದಲ್ವಾ..?! ಅದು "ಅನಂತತೆಯ ಆಗರ", ಈ ಆಘಾತಗಳು , ಕ್ಷುಲ್ಲಕ , ಕ್ಷಣಿಕವಾದುವು..ಇಂತಹುಗಳಿಂದ ನಮ್ಮ ಜೀವನ ಪ್ರೀತಿಯನ್ನು, ಉತ್ಸಾಹ ಸಾಗರವನ್ನು ಬತ್ತಿಸಿಕೊಳ್ಳಬಾರದು..,ಜಾಗೃತರಾಗಬೇಕು ,ಅಂದಾಗ ಮಾತ್ರ ಸಂಭವಿಸುವ ದೊಡ್ಡ ದೊಡ್ಡ ಅಘಾತಗಳನ್ನ ತಪ್ಪಿಸ್ಲಿಕ್ಕೆ ಸಾದ್ಯ..ಇಂತಹ ಸಂಧರ್ಭ ಗಳಲ್ಲೇ ನಾವು ವಿಧಿ ಗೆ ಸವಾಲು ಎಸೆಯಬೇಕು....